ವಾರಂಗಲ್
	ಭಾರತದ ಆಂಧ್ರಪ್ರದೇಶ ರಾಜ್ಯದ ಒಂದು ಜಿಲ್ಲೆ ಹಾಗೂ ವಿಭಾಗಕೇಂದ್ರ, ಪಟ್ಟಣ. ಹೈದರಾಬಾದಿನ ಈಶಾನ್ಯಕ್ಕೆ 133 ಕಿಮೀ ದೂರದಲ್ಲಿದೆ. ವಾರಂಗಲ್ ಕೋಟೆಯ ಈಶಾನ್ಯ ಮೂಲೆಯಲ್ಲಿರುವ ಒಂದು ದೊಡ್ಡ ಬಂಡೆಯಿಂದ ಈ ಊರಿಗೆ ಒರುಕ್ಕಲ್>ವರಂಗಲ್> ವಾರಂಗಲ್ ಎಂಬ ಹೆಸರು ಬಂದಿತೆಂದು ಐತಿಹ್ಯ. ಇದು ಏಕಶಿಲಾ ನಗರಿ ಎಂದೇ ಸುಪ್ರಸಿದ್ಧವಾಗಿದೆ. ತೆಲಂಗಾಣದ ಆಂಧ್ರನರಪತಿಗಳು ಇದನ್ನು ಸ್ಥಾಪಿಸಿದರು. ಉತ್ತರದಲ್ಲಿ ಪೆನಗಂಗಾನದಿ, ದಕ್ಷಿಣದಲ್ಲಿ ಕೃಷ್ಣಾನದಿ ಹರಿಯುತ್ತದೆ. ಈ ಸ್ಥಳ ಎರಡು ನದಿಗಳ ನಡುವಣ ಪ್ರದೇಶ. ಪೂರ್ವದಲ್ಲಿ ಗೋದಾವರಿ ನದಿ ಹರಿಯುತ್ತದೆ. ಜಿಲ್ಲೆಯ ವಿಸ್ತೀರ್ಣ 12846 ಚ.ಕಿಮೀ. ಜನಸಂಖ್ಯೆ 32,31,174. ಪ್ರಮುಖ ಕೈಗಾರಿಕಾ ಪಟ್ಟಣವಾಗಿರುವ ಇದು ಅನೇಕ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ವಿಶೇಷವಾಗಿ ಜಮಖಾನ, ರತ್ನಗಂಬಳಿಗಳಿಗೆ ಪ್ರಪಂಚಖ್ಯಾತಿಯಿದೆ. ಜಿಲ್ಲೆಯ ಕಾಜಿಪೇಟೆ ಮತ್ತು ಡೋರ್ನಕಲ್ ರೈಲುಮಾರ್ಗದ ಜಂಕ್ಷನ್‍ಗಳು ದೇಶದ ನಾನಾ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತವೆ. ವಾಸ್ತುಶಿಲ್ಪಕ್ಕೂ ಹೆಸರಾಗಿರುವ ಇಲ್ಲಿಯ ರಾಮಪ್ಪ ದೇವಾಲಯದಲ್ಲಿ ಸುಂದರ ಕೆತ್ತನೆಯ ವಿಗ್ರಹಗಳಿವೆ ಮತ್ತು ಭಾರತೀಯ ಶಿಲ್ಪಕಲೆಯ ಭವ್ಯತೆಗೆ ನಿದರ್ಶನವಾಗಿದೆ.

	ಹಿಂದೆ ಈ ಪ್ರದೇಶ ಬಾದಾಮಿ ಚಳುಕ್ಯ, ರಾಷ್ಟ್ರಕೂಟ ಮೊದಲಾದ ಅರಸರ ಆಳಿಕೆಗೆ ಒಳಪಟ್ಟಿದ್ದರೂ ಕಾಕತೀಯ ದೊರೆ ರುದ್ರದೇವನ ಆಳ್ವಿಕೆಯಲ್ಲಿ ಪ್ರಸಿದ್ಧವಾಯಿತು(1158-95). ಇವನು ಅದನ್ನು ತನ್ನ ಎರಡನೆಯ ರಾಜಧಾನಿಯಾಗಿ ಮಾಡಿಕೊಂಡಿದ್ದ. ಅನಂತರ ಗಣಪತಿ ದೇವ(1198-1262) ಹನುಮಕೊಂಡದಿಂದ ತನ್ನ ರಾಜಧಾನಿಯನ್ನು ವಾರಂಗಲ್‍ಗೆ ಬದಲಾಯಿಸಿದ. ಅಂದಿನಿಂದ ಅವನತಿಯ ವರೆಗೂ ವಾರಂಗಲ್ ತೆಲಂಗಾಣದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಸ್ಥಳ ಅಲ್ಲಾ-ಉದ್ದಿನ್-ಖಲ್ಜಿಯ ಸೇನಾಪತಿ ಮಲ್ಲಿಕಾಫರ್, ಘಿಯಾ ಸುದ್ದೀನ್ ತುಘಲಕ್ ಹಾಗೂ ಬಹಮನೀ ಸುಲ್ತಾನರ ದಾಳಿಗಳಿಗೆ ಒಳಗಾಗಿ ಉಳಿದಿದ್ದು ಅನಂತರದಲ್ಲಿ ಔರಂಗಜೇಬನ ದಾಳಿಗೆ ತುತ್ತಾಗಿ ಪೂರ್ಣವಾಗಿ ನಾಶವಾಯಿತು. ಮುಂದೆ ಹೈದರಾಬಾದಿನ ನಿಜಾಮನ ರಾಜ್ಯದ ಭಾಗವಾಗಿ ಮುಂದುವರಿಯಿತು. ಸ್ವಾತಂತ್ರ್ಯಾನಂತರ ವಿಶಾಲ ಆಂಧ್ರಪ್ರದೇಶ ರಾಜ್ಯದಲ್ಲಿ ವಿಲೀನವಾಯಿತು.
										 (ಜಿ.ಬಿ.ಆರ್.; ಎಮ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ